ಮಲಪ್ರಭಾ
ಕರ್ನಾಟಕ ರಾಜ್ಯದ ಬೆಳಗಾಂವಿ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಪೂರ್ವ ಮತ್ತು ಈಶಾನ್ಯಾಭಿಮುಖವಾಗಿ ಹರಿಯುವ ಒಂದು ನದಿ; ಕೃಷ್ಣಾನದಿಯ ಉಪನದಿ. ಮಲಾಪಹಾರಿಣಿ, ಮಲಾಪಹಾರಿ. ಮಾಲಿನಿ ಎಂಬ ಹೆಸರುಗಳೂ ಇವೆ. ಬೆಳಗಾಂವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಜಂಬೋಟಿಯಿಂದ ಪಶ್ಚಿಮಕ್ಕೆ ಸುಮಾರು 13 ಕಿ.ಮೀ. ದೂರದ ಕಣಕುಂಬಿಯ ಬಳಿ ಸಹ್ಯಾದ್ರಿಯ ಶಿಖರಗಳಲ್ಲಿ ಉಗಮ. ಅಲ್ಲಿಂದ ಸುಮಾರು 21 ಕಿ.ಮೀ. ಪೂರ್ವಕ್ಕೆ ಹರಿದು ಮುಂದೆ ಆಗ್ನೇಯಕ್ಕೆ ತಿರುಗಿ ಸುಮಾರು 13 ಕಿ.ಮೀ. ದೂರ ಪ್ರವಹಿಸಿ ಖಾನಾಪುರಕ್ಕೆ ಸ್ವಲ್ಪ ಮೊದಲು ಈಶಾನ್ಯಕ್ಕೆ ತಿರುಗಿ ಅನೇಕ ಬಳಸುಗಳೊಡನೆ ಬಲುದೂರ ಅದೇ ದಿಕ್ಕಿನಲ್ಲಿ ಮುಂದುವರಿಯುತ್ತದೆ. ಸವದತ್ತಿ ತಾಲ್ಲೂಕಿನ ಮೆಲ್ಲೂರಿನ ಬಳಿ  ಪೂರ್ವಕ್ಕೆ ಹರಿಯುವ ಈ ನದಿ ಯಕ್ಕುಂಡಿಯ ಬಳಿ ದಕ್ಷಿಣಕ್ಕೆ ತಿರುಗಿ ಮುಗಳಿಯ ಬಳಿ ಮತ್ತೆ ಉತ್ತರಕ್ಕೆ ತಿರುಗಿ ಸ್ವಲ್ಪ ದೂರ ಹರಿದ ಬಳಿಕ ಪೂರ್ವಾಭಿಮುಖವಾಗಿ ಹರಿದು ಹಡಗಲಿಯಿಂದ ಸ್ವಲ್ಪ ಮುಂದೆ ಮತ್ತೆ ಉತ್ತರಕ್ಕೆ ತಿರುಗಿ ನವಿಲುತೀರ್ಥದ ಮೂಲಕ ಹರಿಯುತ್ತದೆ. ಮುಂದೆ ಮನೋಳಿಯಿಂದ ತೋರಗಲ್ಲು ದಾಭಾವರೆಗೂ ಇದರದು ಈಶಾನ್ಯಗಮನ. ತೋರಗಲ್ಲಿನಿಂದ ಸ್ವಲ್ಪ ಮುಂದೆ ನದಿ ಕ್ರಮೇಣ ದಿಕ್ಕು ಬದಲಾಯಿಸಿ ಆಗ್ನೇಯಕ್ಕೆ ತಿರುಗಿ ರಾಮದುರ್ಗದ ಸಮೀಪದಿಂದ ಹರಿದು ಅದೇ ತಾಲ್ಲೂಕಿನ ಆಗ್ನೇಯ ಅಂಚಿನಲ್ಲಿ ಮತ್ತು ಬಾದಾಮಿ ತಾಲ್ಲೂಕಿನ ಅಂಚಿನಲ್ಲಿ ಹರಿದು  ಬಿಜಾಪುರ ಜಿಲ್ಲೆಯ ಎಲ್ಲೆಯನ್ನು ಸೇರುತ್ತದೆ. ಅಲ್ಲಿಂದ ಮುಂದೆ ಸುಮಾರು 32 ಕಿ.ಮೀ ದೂರ ಬಿಜಾಪುರ ಮತ್ತು ಧಾರವಾಡ ಜಿಲ್ಲೆಗಳ ಗಡಿಯಾಗಿ ಪೂರ್ವಾಭಿಮುಖವಾಗಿ ಹರಿದು, ಆಲೂರಿನಿಂದ ಸ್ವಲ್ಪ ಮುಂದೆ ಉತ್ತರಕ್ಕೆ ತಿರುಗಿ ಬಾದಾಮಿ ತಾಲ್ಲೂಕನ್ನು ಪ್ರವೇಶಿಸಿ ಕೃಷ್ಣಾನದಿಯನ್ನು ಸೇರುವವರೆಗೂ ಬಿಜಾಪುರ ಜಿಲ್ಲೆಯಲ್ಲಿಯೇ ಪ್ರವಹಿಸುತ್ತದೆ. ಬಿಜಾಪುರ ಜಿಲ್ಲೆಯಲ್ಲಿ ಮೊದಲು ಅನೇಕ ಬಳಸುಗಳೊಡನೆ ಉತ್ತರಾಭಿಮುಖವಾಗಿ ಹರಿದು, ಬಾದಾಮಿ ತಾಲ್ಲೂಕಿನ ನಾಗರಾಳದ ಬಳಿ ಪೂರ್ವಕ್ಕೆ ತಿರುಗಿ ಮತ್ತೆ ಉತ್ತರಾಭಿಮುಖವಾಗಿ ನೆಲಗಿಯವರೆಗೂ ಮುಂದುವರೆಯುತ್ತದೆ. ಅಲ್ಲಿಂದ ಪೂರ್ವಾಭಿಮುಖವಾಗಿ ಹರಿದು, ಪಟ್ಟದಕಲ್ಲಿನ ಬಳಿ ವಾಯವ್ಯಕ್ಕೆ ತಿರುಗಿ, ಜಾಲಿಹಾಳದ ಬಳಿ ಈಶಾನ್ಯ ಗಮನ ಪಡೆಯುತ್ತದೆ. ಮುಂದೆ ಐಹೊಳೆಯ ಬಳಿ ಮತ್ತೆ ವಾಯುವ್ಯಕ್ಕೆ ತಿರುಗಿ ಕಮತಗಿಯವರೆಗೂ ಹೆಚ್ಚು ಕಡಿಮೆ ಉತ್ತರಾಭಿಮುಖವಾಗಿ ಹರಿದು ಅಲ್ಲಿಂದ ಮತ್ತೆ ಅನೇಕ ಬಳಸುಗಳೊಡನೆ ಈಶಾನ್ಯಾಭಿಮುಖವಾಗಿ ಸಾಗುತ್ತದೆ. ಇಲ್ಲಿಂದ ಮುಂದೆ ಕೂಡಲಸಂಗಮದ ಬಳಿ ಕೃಷ್ಣಾನದಿಯನ್ನು ಸೇರುವವರೆಗೂ ಇದರದು ಈಶಾನ್ಯಾಗಮನ. ಬೂದಿಹಾಳ, ಗಂಜಿಹಾಳ, ಕೆಂಗಲ್ಲ ಮುಂತಾದ ಕಡೆ ಆಗ್ನೇಯಕ್ಕೆ ದಿಕ್ಕು ಬದಲಿಸಿದರೂ ಮುಂದೆ ಬಲು ಬೇಗ ತನ್ನ ಈಶಾನ್ಯಾಗಮನ ಪಡೆಯುತ್ತದೆ.

ಮಲಪ್ರಭಾ ನದಿಯ ಒಟ್ಟು ಉದ್ದ ಸುಮಾರು  330 ಕಿ.ಮೀ. ಇದರಲ್ಲಿ ಸುಮರು 193 ಕಿ.ಮೀ. ದೂರ ಬೆಳಗಾಂವಿ  ಜಿಲ್ಲೆಯ ಖಾನಾಪುರ, ಸಂಪಗಾಂವ, ಸವದತ್ತಿ ಮತ್ತು ರಾಮದುರ್ಗ ತಾಲ್ಲೂಕುಗಳಲ್ಲೂ ಸುಮಾರು 32 ಕಿ.ಮೀ. ಬಿಜಾಪುರ ಮತ್ತ ಧಾರವಾಡ ಜಿಲ್ಲೆಗಳ ಗಡಿಯಾಗಿಯೂ ಅನಂತರದ ಸುಮಾರು 105 ಕಿ.ಮೀ. ದೂರ ಬಿಜಾಪುರ ಜಿಲ್ಲೆಯ ಬಾದಾಮಿ ಮತ್ತು ಹುನಗುಂದ ತಾಲ್ಲೂಕುಗಳಲ್ಲೂ ಹರಿಯುತ್ತದೆ. 

ನದಿ ಹರಿಯುವ ಪ್ರದೇಶದಲ್ಲಿ ಭಿನ್ನರೀತಿಯ ಎರಡು ಭೌಗೋಳಿಕ ಸನ್ನಿವೇಶಗಳನ್ನು ಕಾಣಬಹುದು. ಒಟ್ಟು ಹರಿವಿನ ಮೊದಲ ಭಾಗದಲ್ಲಿ ನದಿ ಕಪ್ಪು ಮಣ್ಣಿನ ಭೂಮಿಯಲ್ಲಿ ಅಷ್ಟೇನೂ ಆಳವಿಲ್ಲದೆ ಹರಿದು ಭೂಮಿಯನ್ನು ಕ್ರಮೇಣ ಕೊರೆಯುತ್ತ ಆಳವಾದ ಕಮರಿಗಳನ್ನು ನಿರ್ಮಿಸುತ್ತ ಸಾಗುತ್ತದೆ.

ಸವದತ್ತಿ ತಾಲ್ಲೂಕಿನ  ನವಿಲುತೀರ್ಥ, ಮುನವಳ್ಳಿ ರಾಮದುರ್ಗ ತಾಲ್ಲೂಕಿನ ತೋರಗಲ್ಲುಗಳಲ್ಲಿ ಇದು ವಿಶಾಲವೂ ಆಳವೂ ಆದ ಕಮರಿಗಳನ್ನು ನಿರ್ಮಿಸಿದೆ. ಮನೋಳಿಯ ಬಳಿಯ ಕಮರಿ ಸುಮಾರು 92 ಮೀ ಆಳವಾಗಿದೆ. ಈ ಪ್ರದೇಶದಲ್ಲಿ ನದಿ ದಂಡೆಗಳು ತೀರ ಕಡಿದಾಗಿದ್ದು ಬೆಣಚುಕಲ್ಲಿನಿಂದ ಕೂಡಿವೆ. ನದಿಯ ಉದ್ದಕ್ಕೂ ತಿರುವುಗಳೂ ಅಲ್ಲಲ್ಲೇ ಮಧ್ಯದಲ್ಲಿ ಚಿಕ್ಕ ಚಿಕ್ಕ ದ್ವೀಪಗಳೂ ಇವೆ. ಮಳೆಗಾಲದಲ್ಲಿ ನದಿಯಲ್ಲಿ ಭಾರಿ ಪ್ರವಾಹ ಇರುತ್ತದೆ. ಮಣ್ಣಿನಿಂದ ಕೂಡಿದ ಬಗ್ಗಡು ನೀರು ಆಗ ಸಾಮಾನ್ಯ. ಉಳಿದ ದಿನಗಳಲ್ಲೂ ನದಿ ಸಣ್ಣದಾದರೂ ನಿರಂತರವಾಗಿ ಹರಿಯುತ್ತಲೇ ಇರುತ್ತದೆ. ಭೂ ವೈಜ್ಞಾನಿಕವಾಗಿ ನೋಡಿದರೆ ಮಲಪ್ರಭಾ ನದಿ ಉತ್ತರದ ಕಲಾದಗಿ ಮತ್ತು  ದಖನ್ ಪ್ರಸ್ಥಭೂಮಿಯ ಎಲ್ಲೆಯಾಗಿ ಹರಿಯುತ್ತದೆ. ಐಹೂಳೆಯಿಂದ ಮುಂದೆ ನದಿ ಕಲಾದಗಿ ಶ್ರೇಣಿಯ ಮೂಲಕವೇ ಗಮಿಸುತ್ತದೆ.
(ಎಸ್.ಎನ್.ಎ.ಆರ್.ಇ.)

ಮಲಪ್ರಭಾ ನದಿಗೆ ಹೇಳಿಕೂಳ್ಳುವಂಥ ದೊಡ್ಡ ಉಪನದಿಗಳಿಲ್ಲ. ಅಲ್ಲಲ್ಲೇ ಕೆಲವು ಹಳ್ಳಗಳು ಬಂದು ಸೇರುತ್ತವೆ. ಮುನವಳ್ಳಿಯ ಬಳಿ ಬೆನಕಟ್ಟೆ ಹಳ್ಳ ಎಡದಂಡೆಯಿಂದಲೂ ಧಾರವಾಡ ಜಿಲ್ಲೆಯ ಆಲೂರಿನ ಬಳಿ ಬೆಣ್ಣೆಹಳ್ಳ ಬಲ ದಂಡೆಯಿಂದಲೂ ಈ ನದಿಯನ್ನು ಕೂಡುತ್ತವೆ. ಕೃಷಿಗಾಗಿ ಈ ನದಿಯನ್ನು ಹೆಚ್ಚಾಗಿ ಬಳಸಿಕೂಂಡಿಲ್ಲ. ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ನವಿಲುತೀರ್ಥದ ಬಳಿ ಇದಕ್ಕೂಂದು ಅಣೆಕಟ್ಟನ್ನು ಕಟ್ಟಲಾಗಿದೆ. ಇದರಿಂದ ಸುಮಾರು 1,20,000 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ದೂರೆಯುವುದು.
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಈ ನದಿಯನ್ನು ಅನೇಕಕಡೆ ದಾಟುತ್ತವೆ. ಖಾನಾಪುರ, ಮುಗಟಖಾನ ಹುಬ್ಬಳ್ಳಿ , ಗುರ್ಲಹೊಸೂರು, ರಾಮದುರ್ಗ, ಪಟ್ಟದಕಲ್ಲು ಮತ್ತು ಕಮಟಗಿಯ ಸಮೀಪದಲ್ಲಿ ಸೇತುವೆಗಳನ್ನು ಕಟ್ಟಿದ್ದಾರೆ.  ಖಾನಾಪುರದ ಬಳಿ ಲೋಂಡ-ಬೆಳಗಾವಿ ಮತ್ತು ಆಲೂರಿನ ಬಳಿ ಗದಗ-ಬಿಜಾಪುರ ರೈಲುಮಾರ್ಗಗಳು ಮಲಪ್ರಭಾ ನದಿಯನ್ನು ದಾಟುತ್ತವೆ.
ನದಿಯ ದಂಡೆಯಲ್ಲಿ ಮತ್ತು ಅದರ ಸಮೀಪ ಅನೇಕ ದೊಡ್ಡ ಊರುಗಳಿವೆ. ಖಾನಾಪುರ, ಮುಗಟಖಾನ ಹುಬ್ಬಳ್ಳಿ, ಎಕ್ಕುಂಡಿ, ಗುರ್ಲಹೊಸೂರು, ಮುನವಳ್ಳಿ, ತೋರಗಲ್ಲು, ರಾಮದುರ್ಗ, ಆಲೂರು, ಕಮತಗಿ, ಗಂಜಿಹಾಳ- ಇವು ನದಿ ದಂಡೆಯಲ್ಲಿರುವ ಹೆಸರಿಸಬಹುದಾದ ಊರುಗಳು. ಈ ನದಿಯ ದಂಡೆಗುಂಟ ಅನೇಕ ಕಡೆ ಪ್ರಾಗೈತಿಹಾಸಿಕ ನೆಲೆಗಳೂ ದೊರಕಿವೆ. ಪ್ರಸಿದ್ದ ಐತಿಹಾಸಿಕ ನೆಲೆಯಾದ ಬಾದಾಮಿ ಈ ನದಿಗೆ ಸುಮಾರು 5 ಕಿಮೀ ದೂರದಲ್ಲಿದೆ. ನದೀ ದಂಡೆಯ ಮೇಲೆ ಇರುವ ನಂದಿಕೇಶ್ವರ, ಪಟ್ಟದಕಲ್ಲು, ಐಹೊಳೆಗಳು ಚಾಳುಕ್ಯ ವಾಸ್ತಶಿಲ್ಪಗಳಿಗಾಗಿ ಪ್ರಸಿದ್ದವಾಗಿದೆ. ಈ ನದಿ ಕೃಷ್ಣಾನದಿಯನ್ನು ಸೇರುವ ಸ್ಥಳವಾದ ಕೂಡಲಸಂಗಮ ಒಂದು ಪ್ರಸಿದ್ಧ ಕ್ಷೇತ್ರ. ಹಾಗೆಯೇ ಬೆಳಗಾಂವಿ ಜಿಲ್ಲೆಯ ಮುನವಳ್ಳಿಯ ನವಿಲುತೀರ್ಥ ಕೂಡ ಒಂದು ಸುಂದರ ತಾಣ.

ಈ ನದಿ ಪವಿತ್ರವಾದುದೆಂದು ಬನಶಂಕರೀ ಮಹಾತ್ಮೆ ವರ್ಣಿಸುತ್ತದೆ. ಮುನವಳ್ಳಿಗೆ ಸ್ವಲ್ಪ ಮೊದಲು ಮತ್ತ್ತು ಅನಂತರ ಸ್ವಲ್ಪ ದೂರ ಈ ನದಿ ಉತ್ತರಕ್ಕೆ ಹರಿಯುವುದರಿಂದ ಅಲ್ಲಿ ಇದನ್ನು ಉತ್ತರವಾಹಿನಿ ಎಂದೂ ಕರೆಯುತ್ತಾರೆ. ಹಿಂದೆ ಬ್ರಹ್ಮ ಯಜ್ಞ ಮಾಡಿದ ಮೇಲೆ ಈ ನದಿಯಲ್ಲಿ ಅವಭೃತ ಸ್ನಾನಮಾಡಿದನೆಂದೂ  ತ್ರಿಪುರಾಸುರರನ್ನು ಕೊಂದ ಸಂದರ್ಭದಲ್ಲಿ  ಶಿವನಿಗೂ ಈ ನದಿಗೂ ಸಂಬಂಧ ಕಲ್ಪಿಸಿ ಇದನ್ನು ರುದ್ರಪಾದ ತೀರ್ಥವೆಂದೂ ಕ್ಷತ್ರಿಯರನ್ನು ಸಂಹರಿಸಿದ ಪರಶುರಾಮ ತನ್ನ ಕೊಡಲಿಯನ್ನು ಇದೇ ನದಿಯಲ್ಲಿ ತೊಳೆದು ಐಹೂಳೆಯ ಬಳಿ ತಪಸ್ಸನ್ನಾಚರಿಸಿದನೆಂದೂ ಪೌರಾಣಿಕ ಕಥೆಗಳಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ